ಇದ್ರಿಸ್ 
	ಪಶ್ಚಿಮ ಏಷ್ಯ ಪ್ರದೇಶದಲ್ಲಿದ್ದನೆಂದು ನಂಬಲಾದ ಒಬ್ಬ ಪ್ರಾಚೀನ ಪ್ರವಾದಿ. ಈತನ ಹೆಸರು, ವಂಶ ಮತ್ತು ವಾಸಸ್ಥಳಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಇವನು ಯಹೂದಿಯೆಂದೂ ಈತನಿಗೆ ಇಲ್ಯಾಸ್ ಎಂದು ಇನ್ನೊಂದು ಹೆಸರಿದೆಯೆಂದೂ ಹೇಳಲಾಗಿದೆ. ಕುರಾನಿನಲ್ಲಿ ಇಲ್ಯಾಸ್ ಮತ್ತು ಇದ್ರಿಸ್ ಎಂಬ ಎರಡು ಬೇರೆ ಬೇರೆ ಹೆಸರುಗಳು ಬಂದಿವೆ. ಒಂದು ಹೇಳಿಕೆಯ ಪ್ರಕಾರ ಇವನು ಈಜಿಪ್ಟಿನ ಒಂದು ಊರಿನಲ್ಲಿ ಹುಟ್ಟಿದ. ಇನ್ನೊಂದು ಹೇಳಿಕೆಯ ಪ್ರಕಾರ ಈತ ಬ್ಯಾಬಿಲೋನಿಯಾದಲ್ಲಿ ಹುಟ್ಟಿ, ಪ್ರವಾದಿಯಾದ ಮೇಲೆ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಈಜಿಪ್ಟಿಗೆ ಬಂದ. ಈತ 72 ಭಾಷೆಗಳಲ್ಲಿ ಪ್ರವೀಣನಾಗಿದ್ದನೆಂದು ಪ್ರತೀತಿ. ಈತನ ಬಳಿಗೆ ಬಂದವರಿಗೆ ಅವರವರ ಭಾಷೆಯಲ್ಲೇ ಉಪದೇಶಿಸುತ್ತಿದ್ದನೆಂದೂ ಹೇಳಲಾಗಿದೆ. ಈತ ಖಗೋಳವಿಜ್ಞಾನ ತತ್ತ್ವಶಾಸ್ತ್ರಗಳೆರಡನ್ನೂ ತಿಳಿದಿದ್ದ ಮೊದಲಿಗರಲ್ಲೊಬ್ಬನೆಂದೂ ವಿಶ್ವದ ಸ್ವರೂಪವನ್ನು ಕುರಿತು ಇತರರಿಗೆ ಬೋಧಿಸುತ್ತಿದ್ದನೆಂದೂ ನಂಬಿಕೆಯಿದೆ. ದೇವರು ಒಬ್ಬನೇ ಎಂದೂ ಕೆಟ್ಟ ಕೆಲಸ ಮಾಡುವವರಿಗೆ ನರಕ ಪ್ರಾಪ್ತವಾಗುವುದೆಂದೂ ಮೈ ಕೈ ಹೃದಯಗಳು ಶುದ್ಧವಾಗಿರಬೇಕೆಂದೂ ಜನರು ನೀತಿವಂತರಾಗಿರಬೇಕೆಂದೂ ಸುಳ್ಳು ಆಣೆ ಇಡಬಾರದೆಂದೂ ದೇವರ ಹೆಸರಿನಲ್ಲಿ ಆಣೆ ಇಡಬಾರದೆಂದೂ ನಾಯಕರ ಆಣತಿಯಂತೆ ನಡೆಯಬೇಕೆಂದೂ ಇನ್ನೊಬ್ಬರು ಸುಖವಾಗಿರುವುದನ್ನು ನೋಡಿ ಅಸೂಯೆ ಪಡಬಾರದೆಂದೂ ಇವನು ಬೋಧಿಸಿದ.
(ಎಸ್.ಎ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ